top of page

ಹೆಮ್ಮೆಯ ಕನ್ನಡಿಗ ಹೇಗಿರಬೇಕು

  • ಮನೆಯಲ್ಲಿ ಪರಸ್ಪರ ನಾವೆಲ್ಲರೂ ಕನ್ನಡದಲ್ಲೇ ಮಾತನಾಡೋಣ.

  •  ಮನೆಗೆ ಯಾರಾದರೂ ನೆಂಟರಿಷ್ಟರು ಬಂದರೆ, ಅವರೊಂದಿಗೂ ಅಭಿಮಾನದಿಂದ ಕನ್ನಡದಲ್ಲೇ ಮಾತನಾಡೋಣ.

  •  ಬೀದಿಯಲ್ಲಿ ಯಾರಾದರೂ ಏನಾದರೂ ಕೇಳಿದರೆ, ಮೊದಲು ಅವರೊಂದಿಗೆ ಕನ್ನಡದಲ್ಲೇ ಮಾತಿಗಿಳಿಯೋಣ.

  • ನಮ್ಮ ದಿನನಿತ್ಯದ ವ್ಯವಹಾರಗಳು ಕನ್ನಡದಲ್ಲೇ ಇರಲಿ (ಉದಾ: ಅಂಚೆ ಕಚೇರಿ, ಬ್ಯಾಂಕು, ಬಸ್ಸು/ರೈಲು ನಿಲ್ದಾಣ/ಅಂಗಡಿ-ಮುಂಗಟ್ಟುಗಳಲ್ಲಿ)

  • ಒಂದಾದರೂ ಕನ್ನಡ ಪತ್ರಿಕೆ/ವಾರಪತ್ರಿಕೆ/ಮಾಸಿಕ/ನಿಯತಕಾಲಿಕಗಳನ್ನು ತಪ್ಪದೆ ಓದೋಣ

  • ಮನೆಯಲ್ಲಿ ಬಳಸುವ ಅಡುಗೆ ಪದಾರ್ಥಗಳಿಗೆ ಕನ್ನಡದಲ್ಲೇ ಒಳ್ಳೆಯ, ಅರ್ಥವತ್ತಾದ ಹೆಸರುಗಳಿವೆ. ಆದ್ದರಿಂದ ಅವುಗಳನ್ನೇ ಬಳಸೋಣ ; (ಉದಾ: ದೊಣ್ಣೆಮೆಣಸಿನಕಾಯಿ (ಕ್ಯಾಪ್ಸಿಕಂ), ಹಸಿಮೆಣಸಿನಕಾಯಿ (ಗ್ರೀನ್ ಚಿಲ್ಲೀಸ್), ಮೊಸರು (ಕರ್ಡ್), ಹಾಲು (ಮಿಲ್ಕ್), ಗಿಣ್ಣು (ಚೀಸ್), ಬೆಣ್ಣೆ (ಬಟರ್), ಉಪ್ಪು (ಸಾಲ್ಟ್), ನೆಲಗಡಲೆ (ಗ್ರೌಂಡ್ ನಟ್), ರವೆ (ರವಾ), ವಡೆ (ವಡಾ), ಉಪ್ಪಿಟ್ಟು (ಉಪ್ಮಾ), ಮೊಸರನ್ನ (ಕರ್ಡ್ ರೈಸ್), ನೀರು (ವಾಟರ್) ಎಣ್ಣೆ (ಆಯಿಲ್), ಅಕ್ಕಿ (ರೈಸ್), ಸಕ್ಕರೆ (ಶುಗರ್), ಬೆಲ್ಲ (ಜಾಗರಿ) ಮುಂತಾದವುಗಳನ್ನು ನೋಡಿ. 

  •  ಮನೆಗೆ ಹಿರಿಯರು/ಕಿರಿಯರು, ನೆಂಟರಿಷ್ಟರು ಬಂದಾಗ ಮಕ್ಕಳಿಗೆ ಅವರನ್ನೆಲ್ಲ ಕನ್ನಡದ ಸಂಬಂಧವಾಚಕಗಳಿಂದಲೇ ಸಂಬೋಧಿಸಿ, ಮಾತನಾಡಿಸುವುದನ್ನು ಅಭ್ಯಾಸ ಮಾಡಿಸಿ (ಉದಾ: ಅಪ್ಪ/ಅಮ್ಮ, ಚಿಕ್ಕಪ್ಪ/ಚಿಕ್ಕಮ್ಮ, ದೊಡ್ಡಪ್ಪ/ದೊಡ್ಡಮ್ಮ, ಅಣ್ಣ/ಅಕ್ಕ, ಅತ್ತೆ/ಮಾವ, ಅಜ್ಜ/ಅಜ್ಜಿ, ಅಳಿಯ, ಸೊಸೆ, ಮೈದುನ, ಭಾವ, ತಾತ, ಸೋದರಳಿಯ, ಸೋದರ ಸೊಸೆ ಇತ್ಯಾದಿಗಳು)

  •  ಜನಪ್ರಿಯ ಮತ್ತು ಅಭಿಜಾತ ಸಾಹಿತ್ಯ ಕೃತಿಗಳನ್ನು ಓದುವುದನ್ನು ಮನೆಮನೆಗಳಲ್ಲಿ ಬೆಳೆಸಿಕೊಳ್ಳಬೇಕು. (ಉದಾ: ತಿಂಗಳಿಗೆ ಒಂದಾದರೂ ಒಳ್ಳೆಯ ಕನ್ನಡ ಪುಸ್ತಕವನ್ನು ಗ್ರಂಥಾಲಯದಿಂದ ತಂದೋ, ಅಂಗಡಿಯಲ್ಲಿ/ಆನ್-ಲೈನಿನಲ್ಲಿ ಖರೀದಿಸಿಯೋ ಓದಬೇಕು).

  • ಇದು ಖಾಸಗಿ ಉದ್ದಿಮೆಗಳ ಕಾಲ. ಅಲ್ಲೆಲ್ಲ ಈಗ ಇಂಗ್ಲೀಷು-ಹಿಂದಿಗಳದೇ ಕಾರುಬಾರು. ಇಂತಹ ಕಡೆಗಳಲ್ಲಿ ಉದ್ಯೋಗಕ್ಕೆಂದು ಹೋಗುವ ಕನ್ನಡಿಗರು ಅಭಿಮಾನದಿಂದ ಕನ್ನಡದಲ್ಲೇ ಮಾತನಾಡಬೇಕು. ಜತೆಗೆ, ತಾವು ಶಿಫಾರಸು ಮಾಡುವ ಸಂದರ್ಭ ಬಂದರೆ, ನೇಮಕಾತಿಯ ಅಧಿಕಾರ ಹೊಂದಿದ್ದರೆ ಆದಷ್ಟೂ ಕನ್ನಡಿಗರಿಗೇ ಸಹಾಯ ಮಾಡಬೇಕು.

  • ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಬೆಳೆಸಬೇಕು ಎನ್ನುವುದು ಈಗ ಒಂದು ಜನಪ್ರಿಯ ಸ್ಲೋಗನ್! ಆದರೆ, ನಮ್ಮ ಕನ್ನಡವನ್ನು ಮೊದಲು ಜ್ಞಾನದ ಭಾಷೆಯಾಗಿಸಬೇಕು. ಇದು ಸಾಧ್ಯವಾದರೆ, ಸಹಜವಾಗಿಯೇ ನಮ್ಮ ಭಾಷೆಯು ಅನ್ನದ ಭಾಷೆಯಾಗುತ್ತದೆ. ಹೀಗಾಗಿ, ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಮನೋವಿಜ್ಞಾನ, ಕ್ರಿಮಿನಾಲಜಿ, ಅರ್ಥಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ, ವಿದೇಶಾಂಗ ವ್ಯವಹಾರ, ರೋಬೋಟಿಕ್ಸ್, ರಕ್ಷಣಾ ನೀತಿ, ಬ್ಯಾಂಕಿಂಗ್, ಸಿನಿಮಾ, ಉದ್ಯಮಶೀಲತೆ, ಬಾಹ್ಯಾಕಾಶ ವಿಜ್ಞಾನ, ಸಾಗರವಿಜ್ಞಾನ ಕುರಿತ ಪುಸ್ತಕಗಳೆಲ್ಲವನ್ನೂ ಕನ್ನಡದಲ್ಲಿ ಹುಲುಸಾಗಿ ಬೆಳೆಸಲು ಇಂಬು ಕೊಡಬೇಕು. 

  • ನಮ್ಮಲ್ಲಿ ಸಂಗೀತ ಕಛೇರಿ, ಭರತನಾಟ್ಯ ಪ್ರದರ್ಶನ ಇತ್ಯಾದಿಗಳೆಲ್ಲ ಬಲುಜೋರಾಗಿ ನಡೆಯುತ್ತವೆ. ಇವೆಲ್ಲವೂ ನಮ್ಮ ನೆಲದ ಕಲೆಗಳೇ ಆಗಿವೆ. ಆದರೆ, ಇಲ್ಲೆಲ್ಲ ನಿರೂಪಣೆ ಇಂಗ್ಲೀಷಿನಲ್ಲೇ ನಡೆಯುತ್ತದೆ. ಇಂತಹ ಕಡೆಗಳಲ್ಲಿ ಕಾರ್ಯಕ್ರಮವೆಲ್ಲ ಕನ್ನಡದ ಕಂಪಿನೊಂದಿಗೆ ನಡೆಯುವಂತೆ ಮಾಡಬೇಕು.

  • `ಕನ್ನಡಿಸಂ’ನ ಕಳಕಳಿಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಹತ್ತನೇ ತರಗತಿಯವರೆಗಾದರೂ ಶಿಕ್ಷಣ ಸಿಗುವಂತೆ ಆಗಬೇಕೆನ್ನುವುದು ಮುಖ್ಯವಾಗಿದೆ. ಇದಕ್ಕಾಗಿ ಅಗತ್ಯವಾದ ಒಂದು ಚಿಂತನೆಯ ಚೌಕಟ್ಟನ್ನು ನಾವೆಲ್ಲರೂ ಸೇರಿ ಮುನ್ನೆಲೆಗೆ ತರಬೇಕು. ಇದರಲ್ಲಿ ಶಿಕ್ಷಣದ ರಾಷ್ಟ್ರೀಕರಣ, ಏಕರೂಪದ ಶಿಕ್ಷಣ, ಸಂವಿಧಾನ ತಿದ್ದುಪಡಿ, ಸರಕಾರಗಳ ಮೇಲೆ ಒತ್ತಡ- ಮುಂತಾದ ಉಪಕ್ರಮಗಳಿಗೆ ಸಂಬಂಧಿಸಿದಂತೆ ಒಂದು ಒತ್ತಡವನ್ನು ನಾವು ಸೃಷ್ಟಿಸಬೇಕು. 

  • ಜೊತೆಗೆ ಬ್ಯಾಂಕು, ಕೋರ್ಟು, ಕಂಪನಿ ಇತ್ಯಾದಿಗಳಲ್ಲಿ ಕನ್ನಡವನ್ನೇ ಅಳವಡಿಸಿಕೊಳ್ಳುವಂತೆ ಮಾಡಬೇಕಾದ್ದು ಕೂಡ `ಕನ್ನಡಿಸಂ’ನ ಭಾಗವೇ ಆಗಿದೆ.

bottom of page